ಎಫ್‌ಡಿಎ ಪರೀಕ್ಷೆಯಲ್ಲಿ ನಕಲು ಪ್ರಕರಣ: ಗ್ರೂಪ್ ಡಿ ನೌಕರ ವಶಕ್ಕೆ, ಪರಾರಿ ಆಗಿರುವ ಅಭ್ಯರ್ಥಿಗಾಗಿ ಶೋಧ

Sunday, 28 Feb, 8.27 pm

ವಿಜಯಪುರ: ಕರ್ನಾಟಕ ಲೋಕ ಸೇವಾ ಆಯೋಗದಿಂದ ಭಾನುವಾರ ನಡೆದ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಯಲ್ಲಿ ವಿಜಯಪುರದ ಜೆಎಸ್‌ಎಸ್‌ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬ ನಕಲು ಮಾಡುತ್ತಿದ್ದ ಘಟನೆ ನಡೆದಿದೆ. ಮಲಿಕಷಾ ಕೊರಬು (ನೋಂದಣಿ ಸಂಖ್ಯೆ 5147677) ನಕಲು ಮಾಡುತ್ತಿದ್ದ ಅಭ್ಯರ್ಥಿ ಎಂದು ತಿಳಿದ್ದು, ಅಭ್ಯರ್ಥಿ ಪರೀಕ್ಷಾ ಕೇಂದ್ರದಿಂದ ಕಾಲುಕಿತ್ತಿದ್ದು, ಪೊಲೀಸರು ಶೋಧಿಸುತ್ತಿದ್ದಾರೆ.

ಪರೀಕ್ಷೆ ವೇಳೆ ನಕಲು ಮಾಡಲು ಅಭ್ಯರ್ಥಿಗೆ ಸಹಕರಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಸಂಸ್ಥೆಯ ಗ್ರೂಪ್ ಡಿ ನೌಕರ ಅಯುಬ್ ಮುಜಾವರ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಉಪಕೇಂದ್ರದ ಮುಖ್ಯ ಅಧೀಕ್ಷಕ, ಸಂವೀಕ್ಷಕ ಹಾಗೂ ಗ್ರೂಪ್ ಡಿ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಬೆಳಗ್ಗೆ 11.25ಕ್ಕೆ ಪರೀಕ್ಷೆ ವೇಳೆ ಅಭ್ಯರ್ಥಿ ನಕಲು ಮಾಡುತ್ತಿದ್ದ ಬಗ್ಗೆ ಪರೀಕ್ಷಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪರೀಕ್ಷಾ ನಿಯಂತ್ರಣಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆಗ ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದು ಬೆಳಕಿಗೆ ಬಂದಿದೆ.