ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ

Sunday, 28 Feb, 8.50 pm

ಚಾಮರಾಜನಗರ: ರಾಜ್ಯ ಸರ್ಕಾರ ಹಳೆಯ ಮೈಸೂರು ಪ್ರಾಂತ್ಯದಲ್ಲಿರುವ ಗೌಡ ಲಿಂಗಾಯತ, ಒಕ್ಕಲಿಗ ಲಿಂಗಾಯತ, ಪಂಚಮಸಾಲಿ ಲಿಂಗಾಯತ ಸಮುದಾಯಗಳನ್ನು ಪ್ರವರ್ಗ2 ಎಗೆ ಸೇರಿಸಬೇಕೆಂದು ಒತ್ತಾಯಿಸಿ ಶೀಘ್ರವೇ ಬೆಂಗಳೂರು ಚಲೋ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ತಾಲೂಕಿನ ಸಂತೆಮರಹಳ್ಳಿಯಲ್ಲಿರುವ ಕಲ್ಯಾಣಮಂಟಪದಲ್ಲಿ, ಭಾನುವಾರ ರೈತ ಮುಖಂಡ ಅಮ್ಮನಪುರ ಮಲ್ಲೇಶ್ ನೇತೃತ್ವದಲ್ಲಿ ನಡೆದ 2ಎ ಮೀಸಲಾತಿಗಾಗಿ ಗೌಡ ಲಿಂಗಾಯತರ ಪೂರ್ವಭಾವಿ ಸಭೆಯಲ್ಲಿ ಬೆಂಗಳೂರು ಚಲೋ ಸೇರಿದಂತೆ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಭೆ ಆರಂಭದಲ್ಲಿ ಅನೇಕ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಪಂಚಮಸಾಲಿ ಸಮುದಾಯದ ಶ್ರೀಗಳು ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಣೆ ಮಾಡಿದರು. 780 ಕಿ.ಮೀ ಪಾದಯಾತ್ರೆ ಮತ್ತು ಹೋರಾಟದ ನೇತೃತ್ವ ವಹಿಸಿರುವ ಸ್ವಾಮಿಗಳ ಕಾರ್ಯವನ್ನು ಶ್ಲಾಸಿದರು.